ಪೈ, ತೋನ್ಸೆ ಅನಂತ
	 1922-81. ಟಿ.ಎ.ಪೈ ಎಂಬ ಹೆಸರಿನಿಂದ ಪ್ರಸಿದ್ಧರಾದ ಬ್ಯಾಂಕರ್, ಉದ್ಯಮ ಪಟು, ಶಿಕ್ಷಣವೇತ್ತ ಮತ್ತು ರಾಜಕಾರಣಿ. ಮಣಿಪಾಲದ ಮಾಂತ್ರಿಕರೆಂದು ಖ್ಯಾತನಾಮರಾದ ಟಿ.ಎಂ.ಎ. ಪೈ (ನೋಡಿ) ಟಿ.ಎ.ಪೈಯವರಿಗೆ ಚಿಕ್ಕಪ್ಪ. 1922 ಜನವರಿ 17ರಂದು ಉಡುಪಿಯ ಸಮೀಪದ ತೋನ್ಸೆಯಲ್ಲಿ ಜನಿಸಿದ ಇವರು ಸ್ಥಳೀಯ ಬೋರ್ಡ್ ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದು ಮುಂಬಯಿಯ ಸಿಡೆನ್ಹಾಮ್ ಕಾಲೇಜ್ ಆಫ್ ಕಾಮರ್ಸ್ ಸೇರಿ 1943ರಲ್ಲಿ ಬಿ.ಕಾಮ್. ಪದವೀಧರರಾದರು. ವಿದ್ಯಾರ್ಜನೆಯ ನಾಲ್ಕು ವರ್ಷಗಳ ಕಾಲ ಮುಂಬಯಿಯಲ್ಲಿ ವಾಸವಾಗಿದ್ದಾಗ ಅವರಿಗೆ ಅಲ್ಲಿಯ ಪ್ರಸಿದ್ಧ ಸರ್ಜನ್ ಬಿ.ವಿ.ಬಾಳಿಗಾ ಅವರ ಜೊತೆ ಸಮೀಪ ಸಂಪರ್ಕ ಉಂಟಾಯಿತು. ಬಾಳಿಗರು ವೃತ್ತಿಯಿಂದ ವೈದ್ಯರಾದರೂ ಪ್ರವೃತ್ತಿಯಿಂದ ರಾಜಕಾರಣಿ. ಸ್ವಾತಂತ್ರ್ಯಯೋಧರಲ್ಲಿ ಅನೇಕರು ಇವರ ಆಪ್ತ ಮಿತ್ರರು. ತರುಣ ಪೈಯವರಿಗೆ ಇವರ ಒಡನಾಟದಲ್ಲಿ ರಾಜಕೀಯದ ಪ್ರಥಮ ಅನುಭವ ದೊರೆಯಿತು. ರಾಷ್ಟ್ರ ಜೀವನದ ಸಮಸ್ಯೆಗಳಿಗೆ ರಾಷ್ಟ್ರ ಮಟ್ಟದಲ್ಲೇ ಉನ್ನತವಾಗಿ ಚಿಂತನೆ ಮಾಡಿ ಪರಿಹಾರ ಕಾಣಬೇಕೆಂದು ಪೈಯವರಿಗೆ ತಾರುಣ್ಯದಲ್ಲಿ ಖಚಿತವಾಗಲು ಬಾಳಿಗರ ಸಹವಾಸ ಕಾರಣವಾಯಿತು. ಬಾಳಿಗರ ಮನೆಯಲ್ಲೇ ಪೈ ಬಿಡಾರ ಕೂಡ ಹೂಡಿದ್ದರು.

ಟಿ.ಎಂ.ಎ. ಪೈ 1925ರಲ್ಲಿ ಕೆನರಾ ಇಂಡಸ್ಟ್ರಿಯಲ್ ಆಂಡ್ ಬ್ಯಾಂಕಿಂಗ್ ಸಿಂಡಿಕೇಟ್ ಲಿಮಿಟೆಡ್ (ಪ್ರಸಕ್ತ ಸಿಂಡಿಕೇಟ್ ಬ್ಯಾಂಕಿನ ಪೂರ್ವಜ) ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಟಿ.ಎ.ಪೈ 1943ರಲ್ಲಿ ಬಿ.ಕಾಮ್. ಶಿಕ್ಷಣ ಮುಗಿಸಿ ಉಡುಪಿಗೆ ಮರಳಿದವರೇ ಈ ಸಂಸ್ಥೆಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ನೇಮಕಗೊಂಡರು. ಅನತಿ ಕಾಲದಲ್ಲಿ ಜನರಲ್ ಮ್ಯಾನೇಜರ್ ಆದರು. ಮುಂದೆ 1962ರಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿಯೂ 1967ರಲ್ಲಿ ಅಧ್ಯಕ್ಷರಾಗಿಯೂ ನಿಯುಕ್ತರಾದರು. 1965 ರಿಂದ ಕೆಲಕಾಲ ಪರ್ಯಂತ, ಭಾರತ ಸರ್ಕಾರ ನೂತನವಾಗಿರಚಿಸಿದ (1965) ಭಾರತೀಯ ಆಹಾರ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದರು. ಗ್ರಾಮಾಂತರದ ಪುಟ್ಟ ಪಟ್ಟಣದಲ್ಲಿ ಹುಟ್ಟಿದ ಸಿಂಡಿಕೇಟಿನಂಥ ಒಂದು ಬ್ಯಾಂಕು ಸಾಲ ಮೂಲಗಳ ವಿತರಣೆಯ ವಿಷಯದಲ್ಲಿಯೂ ಉಳಿತಾಯ ಯೋಜನೆಗಳಲ್ಲಿಯೂ ಹೊಸ ಹೊಸ ಶೋಧನೆಗಳನ್ನು ಅಳವಡಿಸಿ ಅಖಿಲ ಭಾರತ ವ್ಯಾಪ್ತಿ ಮತ್ತು ಕೀರ್ತಿ ಗಳಿಸಿದ್ದಲ್ಲದೆ, ಇಡೀ ಬ್ಯಾಂಕಿಂಗ್ ಕ್ಷೇತ್ರಕ್ಕೆ ಫಲದಾಯಕವಾದ ರೀತಿಯಲ್ಲಿ ಮಾರ್ಗದರ್ಶನ ಮಾಡಿದ ಶ್ರೇಯಸ್ಸಿಗೆ ಪೈ ಕಾರಣರಾದರು. ಜೀವವಿಮಾ ನಿಗಮದಲ್ಲಿ ಇವರಿದ್ದಾಗ ಅಲ್ಲಿಯ ನೌಕರರ ಸೇವಾ ಸೌಕರ್ಯಗಳಿಗಾಗಿಯೂ ಗಿರಾಕಿಗಳ ಅನುಕೂಲತೆಗಾಗಿಯೂ ವ್ಯಾಪಾರ ಕುದುರುವ ಸಲುವಾಗಿಯೂ ಅನೇಕ ವಿಶಿಷ್ಟ ಯೋಜನೆಗಳನ್ನು ಹುಟ್ಟು ಹಾಕಿದರು. 

ಈ ನಡುವೆ 1952ರಲ್ಲಿ ಪೈ ಮದರಾಸು ವಿಧಾನಸಭೆಯ ಸದಸ್ಯರಾಗಿ ಆಯ್ಕೆಗೊಂಡರು. ಚುನಾವಣೆಯ ಕಾಲದಲ್ಲಿ ಮಾತ್ರವಲ್ಲದೆ ಉಳಿದ ಐದು ವರ್ಷಗಳ ಅವಧಿಯಲ್ಲೂ ಇವರು ಕ್ಷೇತ್ರದ ಜನರ ಕಲ್ಯಾಣ ಚಿಂತನೆ ಮಾಡಿ ಸರ್ಕಾರಕ್ಕೂ ಜನತೆಗೂ ಸಮರಸವಾದ ಒಂದು ಬಾಂಧವ್ಯ ಬೆಸೆದರು. 1972ರಲ್ಲಿ ಇವರು ರಾಜ್ಯಸಭೆಗೆ ಆಯ್ಕೆಗೊಂಡದ್ದರಿಂದ ಜೀವವಿಮಾ ನಿಗಮದ ಅಧ್ಯಕ್ಷತೆಗೆ ರಾಜಿನಾಮೆ ಕೊಡಬೇಕಾಯಿತು. ಇಲ್ಲಿಂದ ಮುಂದಕ್ಕೆ ಇವರು ತಮ್ಮ ಪೂರ್ತಿ ವೇಳೆಯನ್ನು ರಾಜಕೀಯದಲ್ಲಿ ಕಳೆಯಬೇಕಾಯಿತು. ಸಮರ್ಥ ಆಡಳಿತ ಕೂಡ ರಾಷ್ಟ್ರಸೇವೆಯೇ ಎಂಬುದನ್ನು ಗಮನಿಸಿ ಇವರಿಗೆ ಅದೇ ವರ್ಷ ಪದ್ಮಭೂಷಣ ಪ್ರಶಸ್ತಿ ಕೊಡಲಾಯಿತು. 1972ರ ಜುಲೈಯಲ್ಲಿ ಕೇಂದ್ರ ಸರ್ಕಾರದಿಂದ ರೈಲ್ವೆ ಸಚಿವರಾಗಿ ಆಹ್ವಾನಿತರಾದಾಗ ಪೈ ಅಖಿಲ ಭಾರತ ಮಟ್ಟದ ಧುರೀಣರೆಂದು ಪರಿಗಣಿಸಲ್ಪಟ್ಟರು.

ಮುಂದಿನ ಐದು ವರ್ಷಗಳ ಕಾಲ ಇವರು ಘನ ಉದ್ದಿಮೆ, ಉಕ್ಕು ಮತ್ತು ಗಣಿ ಉದ್ಯಮ ಮತ್ತು ನಾಗರಿಕ ಪೂರೈಕೆ, ವಿಜ್ಞಾನ ಮತ್ತು ತಂತ್ರವಿದ್ಯೆ ಹೀಗೆ ಹಲವು ಖಾತೆಗಳಲ್ಲಿ ಸಚಿವರಾದರು. ಯಾವುದೇ ಇಲಾಖೆಯನ್ನು ಕೊಟ್ಟರೂ ಮೊದಲು ಅಲ್ಲಿಯ ಜನರ ವಿಶ್ವಾಸವನ್ನು ಗಳಿಸಿ ಇಲಾಖೆಯ ಕೆಲಸ ಸಿದ್ಧಿಮುಖವಾಗಿ ನಡೆಯುವಂತೆ ಪ್ರೇರಣೆ ನೀಡುತ್ತಿದ್ದರು. ಪೈಯವರಿಗೆ ಯಾವುದೇ ಖಾತೆ ಕೊಡಿ ಅದನ್ನು ಅವರು ದಕ್ಷತೆಯಿಂದ ನಡೆಸುತ್ತಾರೆನ್ನುವುದು ಬಲು ಬೇಗ ದಿಲ್ಲಿಯ ಆಡಳಿತ ವಲಯದಲ್ಲಿ ಮನೆಮಾತಾಯಿತು. ಘನ ಉದ್ದಿಮೆ ಮತ್ತು ಉದ್ಯಮ ಸಚಿವರಾಗಿ ಅವರು ಔದ್ಯಮಿಕ ಪ್ರಗತಿಯ ಯೋಜನೆಗಳನ್ನು ಹೂಡಿ ಉತ್ಪಾದನೆ ಹೆಚ್ಚಿಸಿ ನಿರ್ಯಾತರಂಗಲ್ಲಿ ವಿಶಿಷ್ಟ ಸಾಧನೆಗಳನ್ನು ಮಾಡಿದರು. 1977ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ವಿಶೇಷ ಬಹುಮತದಿಂದ ಗೆದ್ದುಬಂದರೂ ಕಾಂಗ್ರೆಸ್ ಪಕ್ಷ ಅಖಿಲ ಭಾರತ ಮಟ್ಟದಲ್ಲಿ ಪರಾಭವಗೊಂಡ ದೆಸೆಯಿಂದ ಸಂಸತ್ತಿನಲ್ಲಿ ಇವರು ವಿರೋಧ ಪಕ್ಷದ ಸದಸ್ಯರಾಗಿ ಉಳಿಯಬೇಕಾಗಿ ಬಂದಿತು. ಅಲ್ಲಿಯೂ ಇವರು ಒಳ್ಳೆಯ ಕೆಲಸ ಮಾಡಿದರು. ಜನತಾ ಆಳ್ವಿಕೆಯಿಂದ ಮುಗಿದ ಪಶ್ಚಾತ್ ನಿರ್ವಿತವಾದ ಚರಣಸಿಂಗ್ ಸರ್ಕಾರದಲ್ಲಿ ಮತ್ತೊಮ್ಮೆ ಕೇಂದ್ರ ಸಚಿವರಾದರು. ಆದರೆ, 1980ರ ಲೋಕಸಭಾ ಚುನಾವಣೆಯಲ್ಲಿ ಸೋತ ಮೇಲೆ ದೆಹಲಿಯನ್ನು ಬಿಟ್ಟು ಮರಳಿ ಮಣಿಪಾಲಕ್ಕೆ ಬಂದರು. 1981 ಜೂನ್ 29ರಂದು ಹಠಾತ್ ಮರಣ ಹೊಂದುವತನಕವೂರಚನಾತ್ಮಕ ಕೆಲಸಗಳಲ್ಲಿ ಮಗ್ನರಾದರು.

ಕರ್ನಾಟಕ ವಿಶ್ವವಿದ್ಯಾಲಯ 1973ರಲ್ಲಿಯೂ ಆಂಧ್ರ ವಿಶ್ವವಿದ್ಯಾಲಯ 1975ರಲ್ಲಿಯೂ ಪೈಯವರಿಗೆ ಗೌರವ ಡಾಕ್ಟರೇಟ್ ನೀಡಿದುವು. ಶಿಕ್ಷಣದಲ್ಲಿ ಇವರ ಪರಿಶ್ರಮ ಅಲ್ಪವೇನಲ್ಲ. ಟಿ.ಎಂ.ಎ. ಪೈಯವರು ಸ್ಥಾಪಿಸಿದ ಮಣಿಪಾಲ ಅಕಾಡೆಮಿಯ ಆಧಾರ ಸ್ತಂಭಗಳಲ್ಲಿ ಟಿ.ಎ.ಪೈ ಒಬ್ಬರು. ಪ್ರಾಥಮಿಕ ಹಂತದಿಂದ ತೊಡಗಿ ವಿಶ್ವವಿದ್ಯಾಲಯ ಶಿಕ್ಷಣದವರೆಗೂ ಪೈಯವರಿಗೆ ಗಾಢ ಅನುಭವವಿತ್ತು. ಉಡುಪಿಯ ಮಹಾತ್ಮಾ ಗಾಂಧಿ ಮೆಮೊರಿಯಲ್ ಕಾಲೇಜಿನ ವ್ಯವಸ್ಥಾಪಕರಾಗಿ 12 ವರ್ಷ ಪರ್ಯಂತ ಅವರು ದುಡಿದಿದ್ದರು. ಎಂದೇ ಕಾಲೇಜು ಶಿಕ್ಷಣದ ಒಳ ಹೊರಗನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದರು. ನಿರುದ್ಯೋಗಮುಖವಾಗಿ ನಡೆಯುವ ಶಿಕ್ಷಣ ಪದ್ಧತಿಯನ್ನು ಅಮೂಲಾಗ್ರ ಬದಲಾಯಿಸಿ ಅದರ ಸ್ಥಳದಲ್ಲಿ ಜೀವನೋಪಯೋಗಕರ ಶಿಕ್ಷಣ ನೆಲೆಗೊಳ್ಳಬೇಕೆಂಬುದು ಇವರ ಆಶಯವಾಗಿತ್ತು. ಗ್ರಾಮಾಂತರದಲ್ಲಿ ಉತ್ಪಾದನೆ ಹಾಗೂ ಸೇವಾ ಸಂದರ್ಭಗಳನ್ನು ಹೆಚ್ಚಿಸುವ ಯೋಜನೆಗಳ ಬಗ್ಗೆ ಅಸಾಧಾರಣವಾದ ವ್ಯಾವಹಾರಿಕ ಸೂಚನೆಗಳು ಇವರ ಬಳಿ ಇದ್ದುವು. ದೇಶದ ತರುಣರು ಸ್ವಂತ ಸಾಹಸದಿಂದ ಸ್ವಾವಲಂಬಿಗಳಾಗಿ ತಮ್ಮ ಜೀವನವನ್ನುರೂಪಿಸಿಕೊಳ್ಳುವುದಕ್ಕೆ ಪ್ರಚಲಿತ ಶಿಕ್ಷಣ ನೆರವಾಗಬೇಕು. ಅವರಲ್ಲಿ ಆತ್ಮವಿಶ್ವಾಸವನ್ನು ಕುಂದಿಸಿ ಪರಾಧೀನತೆಯ ಮನೋಭಾವವನ್ನು ಅದು ಹುಟ್ಟಿಸಬಾರದು ಎಂಬುದು ಇವರ ಅಭಿಮತವಾಗಿತ್ತು.
ಇಷ್ಟಮಿತ್ರರಲ್ಲಿ ಅಪಾರ ಪ್ರೀತಿ, ಬಡವರ ಬಗ್ಗೆ ತೀವ್ರ ಅನುಕಂಪ, ತನ್ನ ಜೊತೆ ಕೆಲಸಗಾರರಲ್ಲಿ ಪ್ರೇಮ, ರಾಷ್ಟ್ರ ಪ್ರಗತಿಯನ್ನು ಕುರಿತು ಉತ್ಕಟ ಆಕಾಂಕ್ಷೆ, ಯಾವುದೇ ಸಮಸ್ಯೆಯನ್ನಾದರೂ ರಾಷ್ಟ್ರೀಯ ಹಿನ್ನೆಲೆಯಲ್ಲಿ ತೂಗಿ ನೋಡಿ ಪರೀಕ್ಷಿಸಿ ಶೀಘ್ರ ಪರಿಹಾರವನ್ನು ಸಂಯೋಜಿಸಬಲ್ಲ ಕುಶಾಗ್ರಮತಿ, ಆಡಳಿತದಲ್ಲಿ ದಕ್ಷತೆ ಇಂಥ ಹತ್ತುಹಲವು ಗುಣಗಳಿಗೆ ಪೈ ಆಗರವಾಗಿದ್ದರು. ದೇಶದ ಜನಸಂಖ್ಯೆ ಹಾಗೂ ತರುಣರ ಶಿಕ್ಷಣ ಇವೆರಡೂ ಅವರ ಕೊನೆ ದಿನಗಳ ಕಾಳಜಿ ಎನಿಸಿದ್ದುವು. 1980ರಲ್ಲಿ ಅವರು ಬರೆದ ನಮ್ಮ ಮಕ್ಕಳಿಗೆ ಒದಗಿತೇ ಕೇಡು? ಎಂಬ ಗ್ರಂಥದಲ್ಲಿ ಜನಸಂಖೈಯ ಸಮಸ್ಯೆಗೆ ಉತ್ತಮ ಪರಿಹಾರಗಳನ್ನು ಸೂಚಿಸಿದ್ದಾರೆ. 

ಮಣಿಪಾಲದ ಶಿಲ್ಪಿ ಟಿ.ಎಂ.ಎ. ಪೈಯವರ ಗರಡಿಗೆ ಸೇರಿದರೂ ತಮ್ಮ ಬದುಕನ್ನು ತಾವೇರೂಪಿಸಿಕೊಂಡ ಟಿ.ಎ.ಪೈಯವರ ಹೆಸರು ಮಾನವೀಯತೆ ಮತ್ತು ದಕ್ಷ ನೇತೃತ್ತ್ವದ ದೆಸೆಯಿಂದ ಚಿರಸ್ಮರಣೀಯವಾಗಿ ನಾಡಿನ ಇತಿಹಾಸದಲ್ಲಿ ಉಳಿಯುತ್ತದೆ. 
(ಕೆ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ